ಉಳಿತಾಯ - ನಿಯೋಜನ ಸಿದ್ಧಾಂತ

	ಒಂದು ಅರ್ಥವ್ಯವಸ್ಥೆಯಲ್ಲಿ ಪಾತ್ರವಹಿಸುವ ಉಳಿತಾಯ ಹಾಗೂ ಬಂಡವಾಳ ನಿಯೋಜನೆಗಳ ಸಂಬಂಧ ಹಾಗೂ ಪರಿಣಾಮಗಳನ್ನು ಕುರಿತು ನಡೆಸಿದ ವಿವೇಚನೆ, ಸಿದ್ಧಾಂತ (ಸೇವಿಂಗ್-ಇನ್ವೆಸ್ಟ್‍ಮೆಂಟ್ ಥಿಯೊರಿ). ಅನುಭೋಗಿಸಲ್ಪಡದೆ ಉಳಿದ ವರಮಾನವೇ ಉಳಿತಾಯವಾದರೆ (ನೋಡಿ- ಉಳಿತಾಯ). ಒಂದು ಗೊತ್ತಾದ ಅವಧಿಯಲ್ಲಿ ಉತ್ಪಾದನ ವಸ್ತುಗಳ ದಾಸ್ತಾನಿನ ನಿವ್ವಳ ಹೆಚ್ಚಳವೇ ಬಂಡವಾಳ ಯೋಜನೆ.

	ಉಳಿತಾಯವೂ ನಿಯೋಜನೆಯೂ ಒಂದೇ ಅಲ್ಲವೆಂಬುದು ಕೇನ್ಸನಿಗೆ ಮುಂಚಿನ ಅರ್ಥಶಾಸ್ತ್ರಜ್ಞರ ದೃಷ್ಟಿಯಾಗಿತ್ತು. ಸಮತೋಲ ಸ್ಥಿತಿಯಲ್ಲಿ ಮಾತ್ರ ಇವೆರಡೂ ಒಂದೇ ಆಗಿರುವುದು ಸಾಧ್ಯವೆಂಬುದು ಇವರ ಅಭಿಪ್ರಾಯ. ಒಂದು ಸಮಾಜದಲ್ಲಿ ಉಳಿತಾಯ ಮಾಡುವವರೂ ಬಂಡವಾಳ ನಿಯೋಜನೆ ಮಾಡುವವರೂ ಬೇರೆ ಬೇರೆ ಜನ. ಆದ್ದರಿಂದ ಈ ಎರಡೂ ಗುಂಪಿನ ಜನರ ಕ್ರಿಯೆಗಳಲ್ಲಿ ಸಮತೆ ಏರ್ಪಡುವುದು ಕೇವಲ ಆಕಸ್ಮಿಕ ಎಂಬುದು ಇವರ ವಾದ. ಒಂದು ಅರ್ಥ ವ್ಯವಸ್ಥೆಯಲ್ಲಿ ಉಳಿತಾಯ ಯೋಜನೆಗಳ ನಡುವೆ ಸರ್ವದಾ ಒಂದು ಬಗೆಯ ಓಟ ಸ್ಪರ್ಧೆ ನಡೆಯುತ್ತಿರುತ್ತದೆ; ಕೆಲವು ಸಮಯಗಳಲ್ಲಿ ನಿಯೋಜನೆ ಮುಂದಾಗಿ ಓಡುತ್ತಿರುತ್ತದೆ; ಉಳಿತಾಯ ಅದರ ಬೆನ್ನಟ್ಟಿ ನಡೆಯುತ್ತದೆ. ಇದು ಅರ್ಥವ್ಯವಸ್ಥೆಯ ಉತ್ಕರ್ಷ ಕಾಲ. ಕೊನೆಗೂ ಒಂದೆಡೆಯಲ್ಲಿ ನಿಯೋಜನೆಯನ್ನು ಉಳಿತಾಯ ಸಂಧಿಸುತ್ತದೆ. ಆ ಕ್ಷಣದಲ್ಲಿ ಇವೆರಡೂ ಸಮ. ಅದು ಸಮತೋಲ ಸ್ಥಿತಿ. ಆದರೆ ಆ ಸ್ಥಿತಿ ಬೇಗ ಬದಲಾಗುತ್ತದೆ. ಉಳಿತಾಯ ಮುಂದುವರಿಯುತ್ತದೆ. ಆದರೆ ನಿಯೋಜನೆ ಹಿಂದೆ ಬೀಳುತ್ತದೆ. ಇದು ಹಿಂಜರಿತದ ಪರಿಸ್ಥಿತಿ. ಈ ಕುಗ್ಗುವಿಕೆ ಮುಂದುವರಿದು ಕೊನೆಗೆ ಮುಗ್ಗಟ್ಟು ಸಂಭವಿಸಬಹುದು. ಇದು ಪರಮಾವಧಿ ಮುಟ್ಟಿದಾಗ ನಿಯೋಜನೆ ಮತ್ತೆ ಮುಂದುವರಿಯುತ್ತದೆ. ಹೀಗೆ ಉಳಿತಾಯಕ್ಕೂ ನಿಯೋಜನೆಗೂ ನಡುವೆ ವಿರಸ ಇರುವುದು ಸಾಮಾನ್ಯ.

	ಒಂದು ಅರ್ಥವ್ಯವಸ್ಥೆಯಲ್ಲಿ ಉದ್ಯಮಿಗಳೂ ಇತರರೂ ಉಳಿತಾಯ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಇದರ ಜೊತೆಗೆ ಉದ್ಯಮಿಗಳು ಬ್ಯಾಂಕುಗಳಿಂದಲೂ ಹಣ ಸಾಲ ಪಡೆದು ಅದನ್ನೂ ನಿಯೋಜಿಸುತ್ತಾರೆ. ಆದ್ದರಿಂದ ಒಟ್ಟು ಉಳಿತಾಯಕ್ಕಿಂತ ಒಟ್ಟು ನಿಯೋಜನೆ ಅಧಿಕವಾಗಿರುತ್ತದೆ. ಹೀಗೆಂಬುದೂ ಒಂದು ವಾದ. 

	ಉಳಿತಾಯವೂ ನಿಯೋಜನೆಯೂ ಸಮವಾಗಿಯೇ ಇರಬೇಕೆಂಬುದಾಗಿ ಕೇನ್ಸ್ ವಾದಿಸಿದ್ದಾನೆ. ಒಂದು ದೇಶದ ಆರ್ಥಿಕ ಚಟುವಟಿಕೆಯ ಫಲವಾಗಿ ಉದ್ಭವಿಸಿದ ಎಲ್ಲ ವರಮಾನಗಳ ಮೊತ್ತವೇ ರಾಷ್ಟ್ರೀಯ ವರಮಾನ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವರಮಾನದಲ್ಲಿ ಒಂದು ಭಾಗವನ್ನು ಅನುಭೋಗಕ್ಕಾಗಿ ಖರ್ಚು ಮಾಡುತ್ತಾನೆ. ಮಿಕ್ಕದ್ದು ಉಳಿತಾಯ.

	ರಾಷ್ಟ್ರೀಯ ವರಮಾನ = ಅನುಭೋಗ ವಸ್ತುಗಳಿಗಾಗಿ ಮಾಡಿದ ಖರ್ಚು + ಉಳಿತಾಯವಾದ ಹಣ 
ಎಂದರೆ -

	ವರಮಾನ = ಅನುಭೋಗ + ಉಳಿತಾಯ
ಆದ್ದರಿಂದ -

	ಉಳಿತಾಯ = ವರಮಾನ - ಅನುಭೋಗ

	ಆದರೆ ಒಂದು ದೇಶದಲ್ಲಿ ಉತ್ಪಾದನೆಂiÀi ಎಲ್ಲ ಅನುಭೋಗ ವಸ್ತುಗಳನ್ನೂ ಉತ್ಪಾದಕ ವಸ್ತುಗಳನ್ನೂ (ನಿಜಬಂಡವಾಳ ಅಥವಾ ನಿಯೋಜನೆ) ಕೂಡಿಸಿದರೆ ದೊರಕುವ ಉತ್ಪಾದನೆಯ ಮೊತ್ತವೇ ರಾಷ್ಟ್ರೀಯ ವರಮಾನ :

	ರಾಷ್ಟ್ರೀಯ ವರಮಾನ = ಉತ್ಪಾದನೆಯಾದ ಅನುಭೋಗ ವಸ್ತುಗಳ ಮೊತ್ತ 
 + 
ಉತ್ಪಾದನೆಯಾದ ಬಂಡವಾಳ ವಸ್ತುಗಳ ಮೊತ್ತ.

	ವರಮಾನ = ಅನುಭೋಗ + ನಿಯೋಜನೆ
ಆದ್ದರಿಂದ - 

	ನಿಯೋಜನೆ = ವರಮಾನ - ಅನುಭೋಗ

	ವರಮಾನದಿಂದ ಅನುಭೋಗ ಕಳೆದರೆ ಉಳಿದದ್ದೇ ಉಳಿತಾಯವೂ ಹೌದು, ನಿಯೋಜನೆಯೂ ಹೌದು.
ಆದ್ದರಿಂದ - 

	ಉಳಿತಾಯ = ನಿಯೋಜನೆ

	ಮೇಲಣ ವಿವೇಚನೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಹಲವಾರಿವೆ. ವರಮಾನ, ಅನುಭೋಗ, ಉಳಿತಾಯ, ನಿಯೋಜನೆ ಇವುಗಳ ಬಗ್ಗೆ ಕೇನ್ಸ್ ನೀಡಿರುವ ವ್ಯಾಖ್ಯೆಗಳನ್ನು ಅಂಗೀಕರಿಸಿದಾಗ ಉಳಿತಾಯವೂ ನಿಯೋಜನೆಯೂ ಒಂದೇ ಎಂಬ ತೀರ್ಮಾನಕ್ಕೆ ಬಂದಂತಾಗುತ್ತದೆ. ಇಲ್ಲಿ ನಡೆದಿರುವ ಆರ್ಥಿಕ ವಿವೇಚನೆ, ಸೂಕ್ಷ್ಮ (ಮೈಕ್ರೊ) ವಿಧಾನದ್ದಲ್ಲ, ಸಮಗ್ರ (ಮ್ಯಾಕ್ರೊ) ವಿಧಾನದ್ದು. ಇಲ್ಲಿ ಉಳಿತಾಯ, ನಿಯೋಜನೆ, ವರಮಾನ, ಅನುಭೋಗ ಎಲ್ಲವೂ ದೃಷ್ಟಿಯದಲ್ಲ, ಸಮಷ್ಟಿಯದು. ಒಬ್ಬ ವ್ಯಕ್ತಿಯನ್ನು ತೆಗೆದುಕೊಂಡರೆ ಆತ ಮಾಡುವ ಉಳಿತಾಯಕ್ಕೂ ನಿಯೋಜನೆಗೂ ಹೊಂದಾಣಿಕೆಯಿಲ್ಲದಿರಬಹುದು. ಆದರೆ ಇಡೀ ವ್ಯವಸ್ಥೆಯನ್ನೇ ತೆಗೆದುಕೊಂಡರೆ ಇವೆರಡೂ ಸಮನಾಗಿರಬೇಕಾದದ್ದು ಅನಿವಾರ್ಯ.

	ಯಾವುದಾದರೂ ಒಂದು ಕಾಲದಲ್ಲಿ ಸಾಮಾಜಿಕರು ಅನುಭೋಗದಲ್ಲಿ ಕಡಿತ ಮಾಡಿದ್ದಾದರೆ ಆಗ ಅಷ್ಟು ಅನುಭೋಗ ವಸ್ತುಗಳು ಅನುಭೋಗಿಗಳಿಗೆ ಮಾರಾಟವಾಗದೆ ಉಳಿಯುತ್ತದೆ. ಇವು ನಿಯೋಜಿತ ವಸ್ತುಗಳ ಶ್ರೇಣಿಗೆ ಸೇರಿಕೊಳ್ಳುತ್ತವೆ. ಆಗ ಅಷ್ಟರಮಟ್ಟಿಗೆ ನಿಯೋಜನೆಯ ಮೊತ್ತ ಅಧಿಕವಾದಂತೆಯೇ ಸರಿ.

	ಉಳಿತಾಯವೂ ನಿಯೋಜನೆಯೂ ಪರಸ್ಪರ ಸಮನಾಗಿರುವುದೆಂಬ ಕೇನ್ಸನ ವಾದವನ್ನು ಅರ್ಥಶಾಸ್ತ್ರಜ್ಞರನೇಕರು ಬಹಳ ಕಾಲ ಒಪ್ಪಿಕೊಳ್ಳಲಿಲ್ಲ. ಇಲ್ಲವೆಂಬುದನ್ನು ಸರ್ ಡೆನಿಸ್ ರಾಬರ್ಟ್‍ಸನ್, ಪ್ರೊ. ಓಹ್ಲಿನ್ ಮುಂತಾದವರು ಕಾಲ ವಿಶ್ಲೇಷಣೆಯ ವಿಧಾನದಿಂದ ತೋರಿಸಿಕೊಟ್ಟಿದ್ದಾರೆ.

	ಉಳಿತಾಯ, ನಿಯೋಜನೆ ಇವು ಕಾಲಾನುಗುಣವಾದವುಗಳು. ಒಂದು ಕಾಲಕ್ಕೆ ಸಂಬಂಧಿಸಿದಂತೆ ಮಾತ್ರವೇ ಇವೆರಡರ ಮೊತ್ತಗಳನ್ನೂ ಅಳೆಯುವುದೂ ಹೋಲಿಸುವುದೂ ಸಾಧ್ಯ. ಹಿಂದೆ ಕೈಗೂಡಿದ ಅಥವಾ ವಾಸ್ತವವಾದ ಉಳಿತಾಯ-ನಿಯೋಜನೆಗಳಿಗೂ ನಿರೀಕ್ಷಿತ ಅಥವಾ ಉದ್ದೇಶಿತ ಉಳಿತಾಯ-ನಿಯೋಜನೆಗಳಿಗೂ ಇರುವ ವ್ಯತ್ಯಾಸಗಳನ್ನು ಇಲ್ಲಿ ಪ್ರಮುಖವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಉಳಿತಾಯದ ಮೊತ್ತಕ್ಕಿಂತ ನಿರೀಕ್ಷಿತ ಅಥವಾ ಉದ್ದೇಶಿತ ನಿಯೋಜನೆ ಅಧಿಕವಾದ ಪಕ್ಷದಲ್ಲಿ ಇದರಿಂದ ಹೆಚ್ಚು ವರಮಾನ ಬರುತ್ತದೆ; ತತ್ಫಲವಾಗಿ ಉಳಿತಾಯವೂ ಅಧಿಕಗೊಳ್ಳುತ್ತದೆ. ನಿಯೋಜನೆಗೆ ಉಳಿತಾಯ ಸಮನಾಗಿ ಮತ್ತೆ ಇವೆರಡರ ಸಮತೋಲ ಸ್ಥಾಪಿತವಾಗುತ್ತದೆ. ವಾಸ್ತವ ನಿಯೋಜನೆಗಿಂತ ಉಳಿತಾಯ ಹೆಚ್ಚಾದಾಗಲೂ ವರಮಾನ ಕಡಿಮೆಯಾಗಿ, ತತ್ಫಲವಾಗಿ ಉಳಿತಾಯವೂ ತಗ್ಗಿ ಸಮತೆ ಏರ್ಪಡುವುದು ಅನಿವಾರ್ಯ.		 (ನೋಡಿ- ಉದ್ಯೋಗ-ಮೀಮಾಂಸೆ)
 			
 (ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ